ಅಲ್ಲಮನಿಗೆ..

ಇಂದಿಗೂ ಅನಿಸುತ್ತಿದೆ
ನೀನಿಲ್ಲೇ ..ಇದ್ದಂತೆ..
ಮಧುಕೇಶ್ವರನ ಗುಡಿಯ ಪ್ರಾಂಗಣದಲಿ
ನೂರು ನೀಲಾಂಜನದ ಬೆಳಕಿನಲಿ
ಶಾಸ್ತ್ರಬದ್ಧ ನೂಪುರದ ದನಿ
ಮಾಯೆಯ ಮೋಹಕ ಹೆಜ್ಜೆಯ ಲಾಸ್ಯ
ನಿನ್ನ ಮದ್ದಲೆಯ ದುಡಿ
ಚಿತ್ತದಲಿ ಅಚ್ಚೊತ್ತಿವೆ!
ಕಂಡಿದ್ದೆಲ್ಲಾ ಕನಸಾಗಿ ಹೋಯಿತೆ?
ಮಾಯೆಯ ಒಪ್ಪದೆ
ಯಾವ ಸೆಳತಕ್ಕೂ ಸಿಕ್ಕದೆ
ಎತ್ತಲೋ ಹೋದೆಯಂತಲ್ಲ ಅಲ್ಲಮ?
ಬೆನ್ನು ಹತ್ತಿದ ಮಾಯೆ
ತನ್ನಾಸೆಗಳ ಚಿತೆಯಲ್ಲೇ ಭಸ್ಮವಾದಳಂತೆ!
“ಸಾಸಿವೆಯ ಸುಖಕ್ಕೆ ಸಾಗರದಷ್ಟು
ಕಷ್ಟಕೋಟಲೆ” ಎಂಬ ನಿನ್ನ ನಿಲುವ
ಲೋಕ ಮೆಚ್ಚಿತು ಮನಸು ತಟ್ಟಿತು!
ಮತ್ತೆಂದೋ ಕಲ್ಯಾಣದಲಿ ಪ್ರಕಟವಾದೆಯಂತೆ!
ಗೌರೀಶಂಕರದೆತ್ತರ ಬೆಳೆದಿದ್ದೆಯಂತೆ!
ಬಸವಣ್ಣನ ಗೌರವ ನೀ ಪಡೆದೆಯಂತೆ!
ಶರಣ ಕುಲದ ಮೆಚ್ಚುಗೆ ಗಳಿಸಿದೆಯಂತೆ!
ಕಲ್ಯಾಣವೇ ಪ್ರಣತೆಯ ಜ್ಯೋತಿಯಂತೆ
ಆತ್ಮ ಕಲ್ಯಾಣದ ಆರತಿಯಂತೆ
ಆದರೂ...
ಇಂದಿಗೂ ಅನಿಸುತ್ತಿದೆ
ನೀನಿಲ್ಲೇ ಇದ್ದಂತೆ
ನಿನ್ನ ಮದ್ದಲೆ ನುಡಿದಂತೆ...!!

Comments

Popular posts from this blog