ಮನದ ಕೃಷಿ!

ನೆಲದ ಕೃಷಿಯಂತೆ
ಮನದ ಕೃಷಿ
ನೆಲ ಉತ್ತು ಹಸನಾಗಿಸಿ
ಬೀಜ ಬಿತ್ತಿ
ಗೊಬ್ಬರ ಉಣಿಸಿ
ಕಾಲಕಾಲಕ್ಕೆ ನೀರೆರೆದರೆ
ಉತ್ಕೃಷ್ಟ ಕೃಷಿ!
ಜೀವಜಾಲಕ್ಕೆ ಸಮೃದ್ಧ ಉಣಿಸು!
ವಿಚಾರದಿಂದ ಮನವ ಹಸನಾಗಿಸಿ
ಉತ್ತಮೋತ್ತಮ ವಿಷಯಗಳ ಬಿತ್ತಿ
ನಿರಂತರ ಮಥನದ ನೀರೆರದರೆ
ಉತ್ಕೃಷ್ಠ ವ್ಯಕ್ತಿತ್ವದ ಬೆಳೆ!
ಸೊಗಸುವುದು ಇಳೆ!

ನೆಮ್ಮದಿ!

ಯಾರಿದ್ದರೀ ಇಳೆಯ ಆದಿಯಲಿ?
ಯಾರುಳಿವರೀ ಇಳೆಯ ಅಂತ್ಯದಲಿ?
ಎಲ್ಲಿದ್ದೆವಿಲ್ಲಿ ಜೀವ ತಳೆವ ಮುನ್ನ?
ಹೋಗುವುವೆಲ್ಲಿಗೆ ಜೀವ ಕಳೆದ ಮೇಲೆ?
ಈ ಚಿಂತೆಗಳು ಕಂತೆಗಳು ನಮಗೇಕೆ?
ಅದಕಾಗೇ ಸೇರುತ್ತವೆÉ ನೂರಾರು ಸಂತೆ!
ಮಾರುವರು ಕೊಳುವವರು ನೂರಿಹರು
ಸಂತೆಗೆ ಹೋಗದೆ ಕಂತೆ ಕಟ್ಟದೆ
ಕರುಬದೆ ಕಿರುಬದೆ ಸೊರಗದೆ
ಇರುವುದರಲಿ ಸೊಗಸು ಕಾಣುತ್ತ
ಮಗ್ಗ ನೇಯುವುದರಲಿ ಬದುಕುವುದು
ವಿಹಿತ ಜೀವರಿಗೆ ಸಹಜ!




ಸಹಜ ಜೀವನ

ಜಗವೊಂದು ಮಗ್ಗ
ನೇಯುವುದೇ ಜೀವರ ಕರ್ಮ
ನೋಯದೇ ಬೇಯದೆ
ನೇಯುವುದು ಜೀವನದ ಮರ್ಮ
ಇದನರಿತರೆ ಜೀವಿಗಳಿಗೆ
ಮಗ್ಗವೇ ಸಗ್ಗ!


ನಿಯಂತ್ರಣ!

ಏನೆಲ್ಲಾ ಮಾಡಿದೆವು
ಬಾನೆತ್ತರ ಬೆಳೆದೆವು
ಗ್ರಹ ನಕ್ಷತ್ರಗಳ ಎಣಿಸಿದೆವು
ದೂರಗಳ ಗುಣಿಸಿದೆವು
ಚಂದ್ರನಿಗೂ ಏಣಿ ಹಾಕಿದೆವು
ಮಂಗಳನಿಗೂ ಲಗ್ಗೆ ಹಾಕಿದೆವು
ಇಲ್ಲಿಂದಲೇ
ಅಲ್ಲಿನ ಯಂತ್ರಗಳ
ನಿಯಂತ್ರಿಸಬಲ್ಲೆವಾದೆವು
ಆದರೆ..ಆದರೆ..
ನಿಯಂತ್ರಿಸಲಾರೆದಾದೆವು
ನಮ್ಮದೇ ಮನಸ್ಸು!!






Comments

Popular posts from this blog